ಕನ್ನಡ ನಾಡು | Kannada Naadu

ಜುಲೈ 6 ಮತ್ತು 7 ರಂದು ಸದ್ಗುರು ಶ್ರೀ ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ  ಪರಮಹಂಸರ ಗುರುಪಾದಕಾ ಪೂಜಾ ಕಾರ್ಯಕ್ರಮ  

04 Jul, 2024

      ಬೆಂಗಳೂರು: ನಗರದ ನರಸಿಂಹ ರಾಜ ಕಾಲೋನಿಯಲ್ಲಿರುವ ಶ್ರೀ ರಾಮಮಂದಿರದಲ್ಲಿ ದಿನಾಂಕ 6. 7.2023ರ ಶನಿವಾರ ಮತ್ತು 7. 07.2023ರ ಭಾನುವಾರ  ಸದ್ಗುರು ಶ್ರೀ ಶ್ರೀ ಶಂಕರಲಿಂಗ ಸರಸ್ವತಿ ಪರಮಹಂಸರವರ ಗುರು ಪಾದಕಾ ಕಾರ್ಯಕ್ರಮವು  ನಡೆಯಲಿದೆ. ಎರಡೂ ದಿನವೂ ಕಾಕಡಾರತಿ, ಶ್ರೀ ಗುರು ಕಥಾಮೃತ ಪಾರಾಯಣ, ಗುರು ಪಾದಕೆಗಳಿಗೆ ರುದ್ರಾಭಿಷೇಕ,  ಅಖಂಡ ಗುರು ಭಜನೆ, ಅಷ್ಟಾವಧಾನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೂ ನೆರವೇರಲಿವೆ. ಗುರು ಪಾದುಕಾ ಕಾರ್ಯಕ್ರಮವು ನಗರದಲ್ಲಿ ನಿರಂತರವಾಗಿ ಕಳೆದ  ಇಪ್ಪತ್ತೊಂದು ವರ್ಷಗಳಿಂದಲೂ ನಡೆದು ಕೊಂಡು ಬಂದಿದೆ.

ಸದ್ಗುರು ಶ್ರೀ ಶ್ರೀ ಶಂಕರಲಿಂಗ ಭಗವಾನರು ಮಧ್ಯ ಕರ್ನಾಟಕದಲ್ಲಿ ಅಧ್ಯಾತ್ಮಿಕ ಜಾಗೃತಿಯನ್ನು ಉಂಟು ಮಾಡಿದ ಮಹನೀಯರು. 1880ರ ಆಗಸ್ಟ್ 21ರಂದು ಜನಿಸಿದ ಶಂಕರಲಿಂಗ ಭಗವಾನರ ಪೂರ್ವಜರು ವಿಜಯನಗರ ಸಂಸ್ಥಾನದಲ್ಲಿದ್ದವರು. ಕೃಷ್ಣಪ್ಪ ಮತ್ತು ಸುಬ್ಬಮ್ಮನವರ ಮಗನಾಗಿ ಜನಿಸಿದ ಅವರ ಪೂರ್ವಾಶ್ರಮದ ಹೆಸರು ರಂಗಣ್ಣನವರು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದು ಕೊಂಡು ಆತ್ಮಸ್ಥೈರ್ಯದಿಂದ ಜೀವನ ಸಾಗಿಸಿದ ಅವರು ಅಧ್ಯಾತ್ಮ ಕ್ಷೇತ್ರದಲ್ಲಿ ಕೂಡ ಆಸಕ್ತರಾಗಿದ್ದರು. ಎಂಟನೆಯ ವಯಸ್ಸಿನಲ್ಲಿ ಬ್ರಹ್ಮೋಪದೇಶದ ಸಂದರ್ಭದಲ್ಲಿಯೇ  ಮಹಾ ನಾಲ್ಕು ವಾಕ್ಯಗಳ ಉಪದೇಶವರು ಅವರಿಗಾಯಿತು. ಮುಂದೆ ಶಂಕರ ಭಗವಾನರು ಮತ್ತು ದತ್ತರಾಜ ಯೋಗೀಂದ್ರರು ಗುರುಗಳಾಗಿ ದೊರಕಿ ರಂಗಣ್ಣನವರನ್ನು ಅಧ್ಯಾತ್ಮಿಕ ಹಿರಿಮೆಯ ಹಾದಿಯಲ್ಲಿ ಮುನ್ನೆಡೆಸಿದರು. ಲೋಕಿಕೆರೆಯಲ್ಲಿ ಗುರುವಾಗಿ ಪ್ರಕಟವಾದ ರಂಗಣ್ಣನವರು ಮಧ್ಯ ಕರ್ನಾಟಕದ ನಾಲ್ಕು ಭಾಗಗಳಲ್ಲಿ ಆಶ್ರಮವನ್ನು ಸ್ಥಾಪಿಸಿ ಅಧ್ಯಾತ್ಮದ ದೀವಿಗೆಯನ್ನು ಬೆಳಗಿದರು. ದಕ್ಷಿಣ ಭಾರತವನ್ನು ಪಾದ ಯಾತ್ರೆಯಲ್ಲಿಯೇ ಸಂಚರಿಸಿ ಜನ ಜಾಗೃತಿಯನ್ನು ಮಾಡಿದರು. ಶೃಂಗೇರಿಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತಿಗಳ ಅನುಜ್ಞೆಯಂತೆ ಸಂನ್ಯಾಸ ದೀಕ್ಷೆಯನ್ನು 6 ಮೇ 1946ರಂದು ಸ್ವೀಕರಿಸಿದರು. ತಮ್ಮ ಅಂತ್ಯಕಾಲವನ್ನು ಕೊಮಾರನಹಳ್ಳಿಯಲ್ಲಿ ಕಳೆದ ಅವರು 16.02.1953ರಂದು ಅಖಂಡದಲ್ಲಿ ನಿಂತರು.

ಬ್ರಹ್ಮಜ್ಞಾನಿಗಳಾದ ಸದ್ಗುರು ಶಂಕರಲಿಂಗ ಭಗವಾನರು ಚತುರಾಶ್ರಮ ಸಂಪನ್ನರು, ಅಷ್ಟಾಂಗ ಸಾಧಕರು, ಜ್ಞಾನ ಯೋಗಿಗಳು. ಅವರ ಪಾದಕಾ ಮಹೋತ್ಸವದಲ್ಲಿ ಎಲ್ಲರೂ ಭಾಗಿಗಳಾಗಿ ಗುರುಗಳ ಕೃಪೆಗೆ ಪಾತ್ರರಾಗ ಬೇಕೆಂದು ವಿನಂತಿ

 

 

ಎನ್.ಎಸ್.ಶ್ರೀಧರ ಮೂರ್ತಿ

ಶ್ರೀ ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಗುರುಪಾದುಕಾ ಭಕ್ತ ಮಂಡಳಿಯ ಪರವಾಗಿ

Publisher: ಕನ್ನಡ ನಾಡು | Kannada Naadu

Login to Give your comment
Powered by